ಉಡುಪಿ:
ಉಡುಪಿ ಜಿಲ್ಲೆಯ ಸಾಸ್ತಾನ ಟೋಲ್ ಪ್ಲಾಜಾದಲ್ಲಿ ನಿವೃತ್ತ ಸೇನಾ ಯೋಧನೊಂದಿಗೆ ಟೋಲ್ ಸಿಬ್ಬಂದಿಗಳು ಅನುಚಿತವಾಗಿ ವರ್ತಿಸಿದ ಆರೋಪಕ್ಕೆ ಸಂಬಂಧಿಸಿದಂತೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ವ್ಹೀಲ್‌ಚೇರ್‌ನಲ್ಲಿ ಸಂಚರಿಸುತ್ತಿದ್ದ ನಿವೃತ್ತ ಯೋಧ ಶ್ಯಾಮರಾಜ್ ಅವರಿಗೆ ಟೋಲ್ ವಿನಾಯಿತಿಯ ಹಕ್ಕು ಇದ್ದರೂ, ಟೋಲ್ ಸಿಬ್ಬಂದಿಗಳು ಟೋಲ್ ಶುಲ್ಕ ಪಾವತಿಸುವಂತೆ ಒತ್ತಾಯಿಸಿ ವಾಹನವನ್ನು ತಡೆದಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಯೋಧ ಶ್ಯಾಮರಾಜ್ ಅಗತ್ಯ ದಾಖಲೆಗಳನ್ನು ತೋರಿಸಿದ್ದರೂ ಸಹ ಸಿಬ್ಬಂದಿಗಳು ನಿಯಮಗಳನ್ನು ಲೆಕ್ಕಿಸದೆ ಅವಮಾನಿಸಿದ್ದಾರೆ ಎನ್ನಲಾಗಿದೆ. ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಸ್ಥಳೀಯರು ಮತ್ತು ವಿವಿಧ ಸಂಘಟನೆಗಳು ಈ ಘಟನೆ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಟೋಲ್ ಪ್ಲಾಜಾದಲ್ಲಿ ನಿಯಮಗಳನ್ನು ಸರಿಯಾಗಿ ಪಾಲಿಸಬೇಕು ಹಾಗೂ ತಕ್ಷಣವೇ ತಪ್ಪಿತಸ್ಥ ಸಿಬ್ಬಂದಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಈ ಹಿಂದೆ ಕೂಡ ಸಾಸ್ತಾನ ಟೋಲ್ ಪ್ಲಾಜಾದಲ್ಲಿ ಸ್ಥಳೀಯ ವಾಹನಗಳ ಮೇಲೆ ಟೋಲ್ ವಿಧಿಸುವ ವಿಚಾರವಾಗಿ ಹಲವು ಬಾರಿ ಪ್ರತಿಭಟನೆಗಳು ನಡೆದಿದ್ದು, ಟೋಲ್ ನಿರ್ವಹಣೆ ಕುರಿತು ಪ್ರಶ್ನೆಗಳು ಎದ್ದಿದ್ದವು.
ಇದೀಗ ನಿವೃತ್ತ ಯೋಧನಿಗೆ ಸಂಬಂಧಿಸಿದ ಈ ಘಟನೆ ಟೋಲ್ ಪ್ಲಾಜಾ ಆಡಳಿತದ ಮೇಲಿನ ಟೀಕೆಯನ್ನು ಮತ್ತಷ್ಟು ಹೆಚ್ಚಿಸಿದೆ.
ಘಟನೆ ಕುರಿತು ಜಿಲ್ಲಾಡಳಿತ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸ್ಪಷ್ಟನೆ ನೀಡಬೇಕೆಂಬ ಒತ್ತಾಯ ಹೆಚ್ಚುತ್ತಿದೆ.
0 Comments