ಜಗತ್ತಿನ ಅತಿದೊಡ್ಡ ಎಐ ಶಿಖರ ಸಮಾವೇಶಕ್ಕೆ ನವದೆಹಲಿ ಸಜ್ಜು : 100+ ದೇಶಗಳು, 35,000ಕ್ಕೂ ಹೆಚ್ಚು ಪ್ರತಿನಿಧಿಗಳೊಂದಿಗೆ India AI Impact Summit 2026!

ನವದೆಹಲಿ: ಕೃತಕ ಬುದ್ಧಿಮತ್ತೆ (AI) ಕ್ಷೇತ್ರದಲ್ಲಿ ಜಾಗತಿಕ ಮಟ್ಟದ ಚರ್ಚೆ ಮತ್ತು ಸಹಕಾರಕ್ಕೆ ವೇದಿಕೆಯಾಗಿರುವ India AI Impact Summit 2026 ಫೆಬ್ರವರಿ 16 ರಿಂದ 20 ರವರೆಗೆ ನವದೆಹಲಿಯ ಭಾರತ್ ಮಂಟಪಂನಲ್ಲಿ ನಡೆಯಲಿದೆ.


 ಈ ಐದು ದಿನಗಳ ಶಿಖರ ಸಮಾವೇಶಕ್ಕೆ 100ಕ್ಕೂ ಹೆಚ್ಚು ದೇಶಗಳಿಂದ 35,000ಕ್ಕೂ ಅಧಿಕ ಪ್ರತಿನಿಧಿಗಳು ನೋಂದಾಯಿಸಿಕೊಂಡಿದ್ದು, ಇದು ವಿಶ್ವದ ಅತಿದೊಡ್ಡ ಎಐ ಸಮಾವೇಶಗಳಲ್ಲಿ ಒಂದು ಎನ್ನಲಾಗಿದೆ.

ಭಾರತ ಸರ್ಕಾರದ ನೇತೃತ್ವದಲ್ಲಿ ಆಯೋಜಿಸಲಾಗಿರುವ ಈ ಸಮಾವೇಶವು ಎಐನ ವಾಸ್ತವಿಕ ಪರಿಣಾಮ, ಜವಾಬ್ದಾರಿಯುತ ಬಳಕೆ, ಗವರ್ನನ್ಸ್ ಮತ್ತು ಜಾಗತಿಕ ಸಹಕಾರ ಮುಂತಾದ ಪ್ರಮುಖ ಅಂಶಗಳ ಮೇಲೆ ಚರ್ಚೆ ನಡೆಯಲಿದೆ.


ಸಮಾವೇಶದಲ್ಲಿ 500ಕ್ಕೂ ಹೆಚ್ಚು ಅಧಿವೇಶನಗಳು, 500ಕ್ಕೂ ಹೆಚ್ಚು ಎಐ ಸ್ಟಾರ್ಟ್‌ಅಪ್‌ಗಳ ಪ್ರದರ್ಶನ, ಹಾಗೂ ಆರೋಗ್ಯ, ಶಿಕ್ಷಣ, ಕೃಷಿ, ಆಡಳಿತ, ಕೈಗಾರಿಕೆ ಮತ್ತು ಡಿಜಿಟಲ್ ಮೂಲಸೌಕರ್ಯ ಕ್ಷೇತ್ರಗಳಲ್ಲಿ ಎಐ ಅನ್ವಯಗಳ ಕುರಿತ ವಿಶ್ಲೇಷಣೆ ನಡೆಯಲಿದೆ.


ಜಾಗತಿಕ ತಂತ್ರಜ್ಞಾನ ನಾಯಕರು, ಸರ್ಕಾರದ ಮುಖ್ಯಸ್ಥರ ಭಾಗಿ!

India AI Impact Summit 2026ಕ್ಕೆ 15–20 ರಾಷ್ಟ್ರಗಳ ಸರ್ಕಾರದ ಮುಖ್ಯಸ್ಥರು, 50ಕ್ಕೂ ಹೆಚ್ಚು ಕೇಂದ್ರ ಮತ್ತು ಅಂತರರಾಷ್ಟ್ರೀಯ ಮಂತ್ರಿಗಳು, ಹಾಗೂ 40ಕ್ಕೂ ಹೆಚ್ಚು ಗ್ಲೋಬಲ್ ತಂತ್ರಜ್ಞಾನ ಕಂಪನಿಗಳ ಸಿಇಒಗಳು ಭಾಗವಹಿಸುವ ನಿರೀಕ್ಷೆಯಿದೆ.



ಮೈಕ್ರೊಸಾಫ್ಟ್, ಎನ್‌ವಿಡಿಯಾ, ಕ್ವಾಲ್ಕೊಮ್, ಐಬಿಎಂ, ಸಿಸ್ಕೋ, ಕ್ಲೌಡ್‌ಫ್ಲೇರ್, ಅನ್ತ್ರೋಪಿಕ್ ಸೇರಿದಂತೆ ಅನೇಕ ಜಾಗತಿಕ ತಂತ್ರಜ್ಞಾನ ಸಂಸ್ಥೆಗಳ ಉನ್ನತ ನಾಯಕರು ಈ ಶಿಖರ ಸಮಾವೇಶದಲ್ಲಿ ಎಐ ನೀತಿ, ಇನೋವೇಷನ್ ಮತ್ತು ಭವಿಷ್ಯದ ತಂತ್ರಜ್ಞಾನ ದಿಕ್ಕುಗಳ ಕುರಿತು ಚರ್ಚೆ ನಡೆಸಲಿದ್ದಾರೆ.


ಇದಲ್ಲದೆ, ಎಐ ನೈತಿಕತೆ, ಮಾನವ-ಕೇಂದ್ರೀಕೃತ ಎಐ, ಡೇಟಾ ಭದ್ರತೆ ಮತ್ತು ಜವಾಬ್ದಾರಿಯುತ ಎಐ ಅಭಿವೃದ್ಧಿ ಕುರಿತಂತೆ ಅಂತರರಾಷ್ಟ್ರೀಯ ತಜ್ಞರು ತಮ್ಮ ಅಭಿಪ್ರಾಯ ಮಂಡಿಸಲಿದ್ದಾರೆ.



ಭಾರತದ ಎಐ ದೃಷ್ಟಿಕೋನಕ್ಕೆ ಜಾಗತಿಕ ವೇದಿಕೆ!

ಭಾರತವನ್ನು ಎಐ ಗ್ಲೋಬಲ್ ಹಬ್ ಆಗಿ ರೂಪಿಸುವ ದೃಷ್ಟಿಯಿಂದ ಈ ಶಿಖರ ಸಮಾವೇಶವು ಪ್ರಮುಖ ಪಾತ್ರ ವಹಿಸಲಿದೆ ಎಂದು ಸರ್ಕಾರ ತಿಳಿಸಿದೆ. AI for All, AI by HER, YUVAi ಸೇರಿದಂತೆ ವಿವಿಧ ವಿಶೇಷ ಉಪಕ್ರಮಗಳ ಮೂಲಕ ಯುವಕರು, ಮಹಿಳೆಯರು ಮತ್ತು ಸ್ಟಾರ್ಟ್‌ಅಪ್‌ಗಳಿಗೆ ಅವಕಾಶ ಕಲ್ಪಿಸಲಾಗುತ್ತಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಸಮಾವೇಶಕ್ಕೂ ಮುನ್ನ ಭಾರತೀಯ ಎಐ ಸ್ಟಾರ್ಟ್‌ಅಪ್‌ಗಳು ಮತ್ತು ತಂತ್ರಜ್ಞಾನ ತಜ್ಞರೊಂದಿಗೆ ಸಭೆ ನಡೆಸಿದ್ದು, ದೇಶದಲ್ಲಿ ಎಐ ಆಧಾರಿತ ನವೋದ್ಯಮ ಮತ್ತು ಉದ್ಯೋಗ ಸೃಷ್ಟಿಗೆ ಹೆಚ್ಚಿನ ಒತ್ತು ನೀಡಲಾಗಿದೆ.


ಹಿಂದಿನ ಎಐ ಸಮಾವೇಶಗಳು ಸುರಕ್ಷತೆ ಮತ್ತು ನಿಯಂತ್ರಣದ ಮೇಲೆ ಹೆಚ್ಚು ಗಮನ ಹರಿಸಿದ್ದರೆ, India AI Impact Summit 2026 ಎಐನ ನೈಜ ಸಾಮಾಜಿಕ ಮತ್ತು ಆರ್ಥಿಕ ಪರಿಣಾಮಗಳ ಮೇಲೆ ಕೇಂದ್ರೀಕರಿಸಿರುವುದು ಇದರ ವಿಶೇಷತೆಯಾಗಿದೆ.

ಜಾಗತಿಕ ಮಟ್ಟದಲ್ಲಿ ಎಐ ನೀತಿ ರೂಪಿಸುವಲ್ಲಿ ಭಾರತ ಪ್ರಮುಖ ಪಾತ್ರ ವಹಿಸುವ ನಿರೀಕ್ಷೆಯಿದ್ದು, ಈ ಶಿಖರ ಸಮಾವೇಶವು ಭವಿಷ್ಯದ ತಂತ್ರಜ್ಞಾನ ಸಹಕಾರಕ್ಕೆ ಹೊಸ ಅಧ್ಯಾಯ ಬರೆಯಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Post a Comment

0 Comments