ಪ್ಯೋಂಗ್ಯಾಂಗ್/ಸಿಯೋಲ್: ಉತ್ತರ ಕೊರಿಯಾದ ನಾಯಕ ಕಿಮ್ ಜೊನ್ಗ್ ಉನ್ ತಮ್ಮ ಸುಮಾರು 13 ವರ್ಷದ ಮಗಳು ಎಂದು ನಂಬಲಾಗುತ್ತಿರುವ ಕಿಮ್ ಜು ಆಏ ಅವರನ್ನು ದೇಶದ ಮುಂದಿನ ನಾಯಕರಾಗಿ ಆಯ್ಕೆ ಮಾಡಿದ್ದಾರೆ ಎಂಬ ಸುದ್ದಿಗಳು ಜಾಗತಿಕ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿವೆ.
ಆದರೆ ಈ ಬಗ್ಗೆ ಇನ್ನೂ ಯಾವುದೇ ಅಧಿಕೃತ ಘೋಷಣೆ ಉತ್ತರ ಕೊರಿಯಾ ಸರ್ಕಾರದಿಂದ ಹೊರಬಂದಿಲ್ಲ.
ದಕ್ಷಿಣ ಕೊರಿಯಾದ ರಾಷ್ಟ್ರೀಯ ಗುಪ್ತಚರ ಸೇವೆ (NIS) ಇತ್ತೀಚೆಗೆ ಸಂಸದರಿಗೆ ನೀಡಿದ ಮಾಹಿತಿಯಲ್ಲಿ, ಕಿಮ್ ಜೋಂಗ್ ಉನ್ ಅವರ ಮಗಳನ್ನು ಭವಿಷ್ಯದ ಉತ್ತರಾಧಿಕಾರಿಯಾಗಿ ತಯಾರಿಸಲಾಗುತ್ತಿದೆ ಎಂಬ ಅಂದಾಜು ವ್ಯಕ್ತಪಡಿಸಿದೆ.
ಇತ್ತೀಚಿನ ತಿಂಗಳಲ್ಲಿ ಕಿಮ್ ಜು ಏ ತಮ್ಮ ತಂದೆಯೊಂದಿಗೆ ಹಲವು ಸೇನಾ ಪ್ರದರ್ಶನಗಳು, ಕ್ಷಿಪಣಿ ಪರೀಕ್ಷಾ ಕಾರ್ಯಕ್ರಮಗಳು ಹಾಗೂ ಪ್ರಮುಖ ಸರ್ಕಾರಿ ಕಾರ್ಯಕ್ರಮಗಳಲ್ಲಿ ಹಾಜರಾಗಿರುವುದು ಗಮನ ಸೆಳೆದಿದೆ.
ರಾಜಕೀಯ ವಿಶ್ಲೇಷಕರ ಪ್ರಕಾರ, ಉತ್ತರ ಕೊರಿಯಾದಲ್ಲಿ ಅಧಿಕಾರ ಹಸ್ತಾಂತರದ ಪ್ರಕ್ರಿಯೆ ಬಹಳ ರಹಸ್ಯವಾಗಿರುತ್ತದೆ.
ರಾಜ್ಯ ಮಾಧ್ಯಮಗಳಲ್ಲಿ ನಿರಂತರವಾಗಿ ಮಗಳನ್ನು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ತೋರಿಸುವುದು, ಅವರನ್ನು ಉತ್ತರಾಧಿಕಾರಿ ಹಂತಕ್ಕೆ ತಂದು ನಿಲ್ಲಿಸುವ ಯತ್ನವಾಗಿರಬಹುದು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಆದರೆ, ಕಿಮ್ ಜು ಏ ಅವರನ್ನು ಅಧಿಕೃತವಾಗಿ ಉತ್ತರಾಧಿಕಾರಿಯಾಗಿ ಘೋಷಿಸಲಾಗಿದೆ ಎಂಬ ದೃಢೀಕರಣ ಇಲ್ಲ. ಅವರ ಹೆಸರು, ವಯಸ್ಸು ಅಥವಾ ಅಧಿಕೃತ ಹುದ್ದೆಯ ಬಗ್ಗೆ ಉತ್ತರ ಕೊರಿಯಾದ ಸರ್ಕಾರ ಸ್ಪಷ್ಟ ಮಾಹಿತಿ ನೀಡಿಲ್ಲ.
ಒಟ್ಟಿನಲ್ಲಿ, ಕಿಮ್ ಜೋಂಗ್ ಉನ್ ತಮ್ಮ ಮಗಳನ್ನು ಮುಂದಿನ ನಾಯಕಿಯಾಗಿ ಘೋಷಿಸಿದ್ದಾರೆ ಎಂಬ ಸುದ್ದಿ ದೃಢಪಟ್ಟಿಲ್ಲ. ಆದರೆ ಅವರನ್ನು ಭವಿಷ್ಯದ ಉತ್ತರಾಧಿಕಾರಿಯಾಗಿ ರೂಪಿಸಲು ಪ್ರಯತ್ನಗಳು ನಡೆಯುತ್ತಿವೆ ಎಂಬ ಅಂದಾಜು ದಕ್ಷಿಣ ಕೊರಿಯಾ ಮೂಲಗಳಿಂದ ವ್ಯಕ್ತವಾಗಿದೆ.
0 Comments