ಭಾರತ ಮತ್ತು ಅಮೆರಿಕ ನಡುವಿನ ಮಹತ್ವದ ದ್ವಿಪಕ್ಷೀಯ ವಾಣಿಜ್ಯ ಒಪ್ಪಂದವು ಅಂತಿಮಗೊಂಡಿದ್ದು, ಎರಡೂ ದೇಶಗಳ ವ್ಯಾಪಾರ ಸಂಬಂಧಗಳಿಗೆ ಹೊಸ ಉತ್ತೇಜನ ದೊರಕಿದೆ.
ಈ ಒಪ್ಪಂದದಡಿ ಅಮೆರಿಕವು ಭಾರತೀಯ ಸರಕುಗಳ ಮೇಲೆ ವಿಧಿಸಲಾಗುತ್ತಿದ್ದ ಹೆಚ್ಚಿನ ಆಮದು ಸುಂಕವನ್ನು ಗಣನೀಯವಾಗಿ ಕಡಿತಗೊಳಿಸಿ ಶೇ.18ಕ್ಕೆ ಇಳಿಸುವುದಾಗಿ ಘೋಷಿಸಿದೆ.
ಈ ಒಪ್ಪಂದದ ಜಾರಿಯಾದರೆ, ಭಾರತವು ಅಮೆರಿಕದಿಂದ ಇಂಧನ, ರಕ್ಷಣಾ ಉಪಕರಣಗಳು, ವಿಮಾನಗಳು, ತಂತ್ರಜ್ಞಾನ ಮತ್ತು ಕೃಷಿ ಉತ್ಪನ್ನಗಳ ಖರೀದಿಯನ್ನು ಹೆಚ್ಚಾಗುವುದು. ಮುಂದಿನ ವರ್ಷಗಳಲ್ಲಿ ಒಟ್ಟು ವಾಣಿಜ್ಯ ಮೌಲ್ಯವನ್ನು ಶತಕೋಟಿ ಡಾಲರ್ ಮಟ್ಟಕ್ಕೆ ಹೆಚ್ಚಿಸುವ ಗುರಿಯನ್ನು ಎರಡೂ ದೇಶಗಳು ಹೊಂದಿವೆ.
ಒಪ್ಪಂದದ ಪ್ರಮುಖ ಅಂಶಗಳಲ್ಲಿ ಕೆಲವು ಕ್ಷೇತ್ರಗಳಲ್ಲಿ ಪರಸ್ಪರ ಸುಂಕ ಸಡಿಲಿಕೆ, ಮಾರುಕಟ್ಟೆ ಪ್ರವೇಶಕ್ಕೆ ಅವಕಾಶ, ಹಾಗೂ ಕೈಗಾರಿಕಾ ಮತ್ತು ತಾಂತ್ರಿಕ ಸಹಕಾರವನ್ನು ವಿಸ್ತರಿಸುವುದು ಸೇರಿವೆ.
ಇದರೊಂದಿಗೆ ಭಾರತೀಯ ವಸ್ತ್ರೋದ್ಯಮ, ರತ್ನಾಭರಣ, ಎಂಜಿನಿಯರಿಂಗ್ ಸರಕುಗಳು ಮತ್ತು ರಾಸಾಯನಿಕ ಉತ್ಪನ್ನಗಳಿಗೆ ಅಮೆರಿಕದ ಮಾರುಕಟ್ಟೆಯಲ್ಲಿ ಹೆಚ್ಚಿನ ಅವಕಾಶಗಳು ಸಿಗಲಿವೆ ಎಂದು ಅಂದಾಜಿಸಲಾಗಿದೆ.
ವಾಣಿಜ್ಯ ಒಪ್ಪಂದದ ಘೋಷಣೆಯ ನಂತರ ದೇಶೀಯ ಷೇರು ಮಾರುಕಟ್ಟೆಗಳಲ್ಲಿ ಧನಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಹೂಡಿಕೆದಾರರಲ್ಲಿ ವಿಶ್ವಾಸ ಹೆಚ್ಚಾಗಿದೆ. ಆರ್ಥಿಕ ತಜ್ಞರ ಪ್ರಕಾರ, ಈ ಒಪ್ಪಂದವು ಉದ್ಯೋಗ ಸೃಷ್ಟಿ, ರಫ್ತು ವೃದ್ಧಿ ಹಾಗೂ ಆರ್ಥಿಕ ಬೆಳವಣಿಗೆಗೆ ಸಹಕಾರಿಯಾಗಲಿದೆ.
ಸರ್ಕಾರದ ಮೂಲಗಳ ಮಾಹಿತಿ ಪ್ರಕಾರ, ಇದು ಮೊದಲ ಹಂತದ ಒಪ್ಪಂದವಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಕ್ಷೇತ್ರಗಳನ್ನು ಒಳಗೊಂಡ ಹೆಚ್ಚುವರಿ ಒಪ್ಪಂದಗಳ ಕುರಿತು ಚರ್ಚೆಗಳು ನಡೆಯಲಿವೆ.
0 Comments