ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ಜುಮ್ಮಾ ನಮಾಜ್ ವೇಳೆ ಭಯಾನಕ ಬಾಂಬ್ ಸ್ಫೋಟ: ಹಲವು ಸಾವು–ನೋವು ಶಂಕೆ!

ಇಸ್ಲಾಮಾಬಾದ್:ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್‌ನ ತರ್ಲಾಯ್ ಕಲಾನ್ ಪ್ರದೇಶದಲ್ಲಿ ಇರುವ ಇಮಾಂಬಾರ್ಗಾ ‘ಕಸ್ರ್-ಎ-ಖದಿಜತುಲ್ ಕುಬ್ರಾ’ ಸಮೀಪ ಶುಕ್ರವಾರ ಭೀಕರ ಬಾಂಬ್ ಸ್ಫೋಟ ಸಂಭವಿಸಿದ್ದು, ಪಾಕಿಸ್ತಾನವನ್ನು ಬೆಚ್ಚಿಬೀಳಿಸಿದೆ. 


ಈ ಸ್ಫೋಟವು ಜುಮ್ಮಾ ನಮಾಜ್ ನಡೆಯುತ್ತಿದ್ದ ಸಮಯದಲ್ಲಿ ಸಂಭವಿಸಿದ್ದು, ನಮಾಜ್‌ಗೆ ಜಮಾಯಿಸಿದವರನ್ನೇ ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ ಎಂದು ವರದಿಗಳು ತಿಳಿಸಿವೆ.



ಸ್ಫೋಟದ ತೀವ್ರತೆಯಿಂದ ಇಮಾಂಬಾರ್ಗಾ ಆವರಣದಲ್ಲಿ ಭಾರೀ ಹಾನಿ ಸಂಭವಿಸಿದ್ದು, ಹಲವು ಜನ ಸ್ಥಳದಲ್ಲೇ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಜೊತೆಗೆ ಅನೇಕರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ತಕ್ಷಣವೇ ಸಮೀಪದ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಗಾಯಾಳುಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ಘಟನೆಯ ಮಾಹಿತಿ ದೊರಕಿದ ಕೂಡಲೇ ಪೊಲೀಸರು, ಭದ್ರತಾ ಪಡೆಗಳು ಹಾಗೂ ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದು, ಪ್ರದೇಶವನ್ನು ಸಂಪೂರ್ಣವಾಗಿ ಸೀಲ್ ಮಾಡಲಾಗಿದೆ. ಬಾಂಬ್ ನಿಷ್ಕ್ರಿಯ ದಳ ಹಾಗೂ ಫಾರೆನ್ಸಿಕ್ ತಂಡಗಳು ಸ್ಥಳದಲ್ಲಿ ಪರಿಶೀಲನೆ ನಡೆಸುತ್ತಿವೆ.



ಪಾಕಿಸ್ತಾನ ಸರ್ಕಾರ ಆಸ್ಪತ್ರೆಗಳಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ್ದು, ಗಾಯಾಳುಗಳಿಗೆ ತ್ವರಿತ ಚಿಕಿತ್ಸೆ ಒದಗಿಸುವಂತೆ ಸೂಚನೆ ನೀಡಲಾಗಿದೆ. ಸ್ಫೋಟದ ಹಿಂದಿರುವ ದುಷ್ಕರ್ಮಿಗಳ ಗುರುತು ಪತ್ತೆಗೆ  ತನಿಖೆ ಆರಂಭಿಸಲಾಗಿದೆ ಎಂದು ಸರಕಾರ ತಿಳಿಸಿದೆ.

ಈ ದಾಳಿ ಇತ್ತೀಚಿನ ವರ್ಷಗಳಲ್ಲಿ ಇಸ್ಲಾಮಾಬಾದ್‌ನಲ್ಲಿ ನಡೆದ ಅತ್ಯಂತ ಗಂಭೀರ ಉಗ್ರ ದಾಳಿಗಳಲ್ಲೊಂದು ಎಂದು ಹೇಳಲಾಗುತ್ತಿದ್ದು, ದೇಶದ ಭದ್ರತೆ ಕುರಿತ ಚಿಂತೆಯನ್ನು ಮತ್ತಷ್ಟು ಹೆಚ್ಚಿಸಿದೆ.



Post a Comment

0 Comments