ಮೋದಿ–ಮ್ಯಾಕ್ರೋನ್ ಮಾತುಕತೆ; ಭಾರತ–ಫ್ರಾನ್ಸ್ ರಕ್ಷಣಾ ವಲಯಕ್ಕೆ ಸಿಕ್ಕಿತು ಹೊಸ ವೇಗ!


ಮುಂಬೈ/ಬೆಂಗಳೂರು, ಫೆಬ್ರವರಿ 17: ಭಾರತ ಮತ್ತು ಫ್ರಾನ್ಸ್ ನಡುವಿನ ದ್ವಿಪಕ್ಷೀಯ ಸಂಬಂಧಗಳಿಗೆ ಹೊಸ ಉತ್ತೇಜನ ನೀಡುವ ಉದ್ದೇಶದಿಂದ ಉನ್ನತ ಮಟ್ಟದ ರಾಜಕೀಯ ಮತ್ತು ರಕ್ಷಣಾ ಮಾತುಕತೆಗಳು ಇಂದು ನಡೆದವು.


ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಅವರು ಮುಂಬೈನಲ್ಲಿ ಭೇಟಿಯಾಗಿ ಸಮಗ್ರ ತಂತ್ರಜ್ಞಾನ, ರಕ್ಷಣಾ ಸಹಕಾರ, ಇಂಡೋ-ಪೆಸಿಫಿಕ್ ಪ್ರದೇಶದ ಭದ್ರತೆ ಮತ್ತು ಜಾಗತಿಕ ವಿಚಾರಗಳ ಕುರಿತು ಚರ್ಚಿಸಿದರು.

ಇದೇ ವೇಳೆ, ಬೆಂಗಳೂರಿನಲ್ಲಿ ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಫ್ರಾನ್ಸ್ ರಕ್ಷಣಾ ಸಚಿವೆ ಕ್ಯಾಥರಿನ್ ವಾಟ್ರಿನ್ ಅವರ ನೇತೃತ್ವದಲ್ಲಿ 6ನೇ ವಾರ್ಷಿಕ ಭಾರತ–ಫ್ರಾನ್ಸ್ ರಕ್ಷಣಾ ಸಂವಾದ ನಡೆಯಿತು.


ಸಭೆಯಲ್ಲಿ ಎರಡು ದೇಶಗಳ ನಡುವೆ ಮುಂದಿನ ದಶಕಕ್ಕೆ ಅನ್ವಯಿಸುವ ರಕ್ಷಣಾ ಸಹಕಾರದ ಚಟುವಟಿಕೆಗಳನ್ನು ಬಲಪಡಿಸುವ ಉದ್ದೇಶದಿಂದ ಒಪ್ಪಂದವನ್ನು ನವೀಕರಿಸುವ ಕುರಿತು ಚರ್ಚೆ ನಡೆಯಿತು.

 ಇದರಿಂದ ಜಂಟಿ ಅಭ್ಯಾಸಗಳು, ತಂತ್ರಜ್ಞಾನ ವಿನಿಮಯ ಮತ್ತು ರಕ್ಷಣಾ ಕೈಗಾರಿಕಾ ಸಹಭಾಗಿತ್ವ ಹೆಚ್ಚುವ ನಿರೀಕ್ಷೆ ಇದೆ.

ಭಾರತದಲ್ಲಿ ಉನ್ನತ ಮಟ್ಟದ ಏರ್-ಟು-ಗ್ರೌಂಡ್ “HAMMER” ಕ್ಷಿಪಣಿಗಳ ಉತ್ಪಾದನೆಗೆ ಜಂಟಿ ಯೋಜನೆ ರೂಪಿಸುವ ಕುರಿತು ಮಾತುಕತೆ ನಡೆದಿದೆ. 

ಈ ಯೋಜನೆ ಯಶಸ್ವಿಯಾದರೆ “ಮೇಕ್ ಇನ್ ಇಂಡಿಯಾ” ನೀತಿಗೆ ದೊಡ್ಡ ಉತ್ತೇಜನ ಸಿಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ಕರ್ನಾಟಕದಲ್ಲಿ ಸ್ಥಾಪಿಸಲಾದ H125 ಹೆಲಿಕಾಪ್ಟರ್ ಅಂತಿಮ ಅಸೆಂಬ್ಲಿ ಲೈನ್ ಉದ್ಘಾಟನೆಯನ್ನು ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಮ್ಯಾಕ್ರೋನ್ ವರ್ಚುವಲ್ ಮೂಲಕ ಉದ್ಘಾಟಿಸುವ ಕಾರ್ಯಕ್ರಮವೂ ಈ ಭೇಟಿಯ ಪ್ರಮುಖ ಭಾಗವಾಗಿದೆ. ಈ ಘಟಕವನ್ನು ಟಾಟಾ ಮತ್ತು ಎರ್‌ಬಸ್ ಸಹಭಾಗಿತ್ವದಲ್ಲಿ ಸ್ಥಾಪಿಸಲಾಗಿದೆ.

ಇದು ಭಾರತದಲ್ಲಿ ನಾಗರಿಕ ಹಾಗೂ ರಕ್ಷಣಾ ಹೆಲಿಕಾಪ್ಟರ್ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸುವ ಮಹತ್ವದ ಹೆಜ್ಜೆ ಎಂದು ಪರಿಗಣಿಸಲಾಗಿದೆ.


ಮುಂಬೈ ಸಭೆಯಲ್ಲಿ ಸಮುದ್ರ ರಾಫೇಲ್ ಯುದ್ಧವಿಮಾನ ಒಪ್ಪಂದ, ಎಂಜಿನ್ ತಂತ್ರಜ್ಞಾನ, ಬಾಹ್ಯಾಕಾಶ ಮತ್ತು ಕೃತಕ ಬುದ್ಧಿಮತ್ತೆ ಕ್ಷೇತ್ರಗಳಲ್ಲಿ ಸಹಕಾರ ವಿಸ್ತರಣೆ ಕುರಿತು ಕೂಡ ಚರ್ಚೆ ನಡೆದಿರುವ ಮಾಹಿತಿ ಲಭ್ಯವಾಗಿದೆ.

ಈ ಭೇಟಿ ಭಾರತ–ಫ್ರಾನ್ಸ್ ಸಂಬಂಧಗಳನ್ನು “ಸಾಮಾನ್ಯ ರಕ್ಷಣಾ ಖರೀದಿ” ಮಟ್ಟದಿಂದ “ಜಂಟಿ ಉತ್ಪಾದನೆ ಮತ್ತು ತಂತ್ರಜ್ಞಾನ ಪಾಲುದಾರಿಕೆ” ಹಂತಕ್ಕೆ ಕೊಂಡೊಯ್ಯುವ ಪ್ರಮುಖ ಘಟ್ಟವಾಗಿವೆ. ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಎರಡೂ ದೇಶಗಳ ತಂತ್ರಜ್ಞಾನ ಮತ್ತು ಭದ್ರತಾ ಸಹಕಾರ ಹೆಚ್ಚುವ ನಿರೀಕ್ಷೆ ವ್ಯಕ್ತವಾಗಿದೆ.

Post a Comment

0 Comments