ಢಾಕಾ, ಫೆಬ್ರವರಿ 2026: ಬಾಂಗ್ಲಾದೇಶದಲ್ಲಿ ರಚನೆಯಾದ ತಾರಿಕ್ ರಹ್ಮಾನ್ ನೇತೃತ್ವದ ಹೊಸ ಸರ್ಕಾರದಲ್ಲಿ ಬಾಂಗ್ಲಾದ ಹಿರಿಯ ಹಿಂದೂ ನಾಯಕ ನಿತೈ ರಾಯ್ ಚೌಧುರಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
ಮುಸ್ಲಿಂ ಬಾಹುಳ್ಯ ವಿರುವ ದೇಶದಲ್ಲಿ ಅಲ್ಪಸಂಖ್ಯಾತ ಸಮುದಾಯಕ್ಕೆ ವಿಶ್ವಾಸ ತುಂಬುವ ಪ್ರಯತ್ನವಾಗಿ ಈ ಇವರಿಗೆ ಸಚಿವ ಸ್ಥಾನ ನೀಡಲಾಗಿದೆ ಎಂದೇ ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ.
ವಿರೋಧ ಪಕ್ಷವಾದ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ 2026ರ ಸಂಸತ್ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ ಬಳಿಕ ಈ ಹೊಸ ಸರ್ಕಾರ ರಚನೆಯಾಗಿದೆ. 2024ರಲ್ಲಿ ಮಾಜಿ ಪ್ರಧಾನಿ ಶೇಖ್ ಹಸೀನಾ ಅಧಿಕಾರದಿಂದ ದೂರವಾದ ನಂತರ ದೇಶದಲ್ಲಿ ರಾಜಕೀಯ ಅಶಾಂತಿ ಮುಂದುವರಿದಿದ್ದ ಹಿನ್ನೆಲೆಯಲ್ಲಿ ಈ ಸರ್ಕಾರ ಅಧಿಕಾರಕ್ಕೆ ಬಂದಿದೆ.
ಕಳೆದ ಎರಡು ವರ್ಷಗಳಲ್ಲಿ ಬಾಂಗ್ಲಾದೇಶದಲ್ಲಿ ರಾಜಕೀಯ ಹಿಂಸಾಚಾರ ಹಾಗೂ ಉದ್ವಿಗ್ನತೆ ಹೆಚ್ಚಾಗಿದೆ. ವಿಶೇಷವಾಗಿ ಹಿಂದೂ ಅಲ್ಪಸಂಖ್ಯಾತರ ಮನೆಗಳು, ದೇವಸ್ಥಾನಗಳು ಮತ್ತು ವ್ಯಾಪಾರಿಗಳ ಮೇಲೆ ದಾಳಿಗಳು ನಿರಂತರ ನಡೆಯುತ್ತಿವೆ. ಈ ಬೆಳವಣಿಗೆಗಳು ಅಲ್ಪಸಂಖ್ಯಾತರಲ್ಲಿ ಭದ್ರತೆ ಕುರಿತು ಆತಂಕ ಹೆಚ್ಚಿಸಿವೆ.
ಈ ಹಿನ್ನೆಲೆಯಲ್ಲಿ ಹಿಂದೂ ನಾಯಕನನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳುವುದರ ಮೂಲಕ, ಸರ್ಕಾರದ ಕಡೆಯಿಂದ ಒಂದು ಸಂದೇಶ ನೀಡುವ ಪ್ರಯತ್ನವೆಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ವಿಶ್ಲೇಷಕರು ಹೇಳುವಂತೆ, ಮುಸ್ಲಿಂ ಬಹುಸಂಖ್ಯಾತ ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರಿಗೆ ಪ್ರತಿನಿಧಿತ್ವದ ಭರವಸೆ, ಇತ್ತೀಚೆಗೆ ನಡೆದ ಹಿಂಸಾಚಾರದ ನಂತರ ವಿಶ್ವಾಸ ಮೂಡಿಸುವ ಪ್ರಯತ್ನ, ಅಂತರಾಷ್ಟ್ರೀಯ ಮಟ್ಟದಲ್ಲಿ ಸರ್ಕಾರದ ನಿಲುವು ಪ್ರಕಟಿಸುವುದು ಈ ಹೆಜ್ಜೆಯ ಹಿಂದಿರುವ ಉದ್ದೇಶ ಎನ್ನಲಾಗಿದೆ.
ಅಲ್ಪಸಂಖ್ಯಾತರ ಸುರಕ್ಷತೆ ವಿಷಯವು ನೆರೆಯ ಭಾರತಕ್ಕೂ ಸೂಕ್ಷ್ಮ ವಿಷಯವಾಗಿದೆ.
ಸಾಂಸ್ಕೃತಿಕ ಮತ್ತು ಐತಿಹಾಸಿಕ ಸಂಬಂಧಗಳ ಹಿನ್ನೆಲೆ ಈ ಬೆಳವಣಿಗೆ ದ್ವಿಪಕ್ಷೀಯ ಸಂಬಂಧಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ರಾಜಕೀಯ ವೀಕ್ಷಕರು ಹೇಳಿದ್ದಾರೆ.
ಆದರೆ ದೇಶದಲ್ಲಿ ಶಾಂತಿ ಸ್ಥಾಪನೆ, ಹಿಂಸಾಚಾರ ನಿಯಂತ್ರಣ ಮತ್ತು ಅಲ್ಪಸಂಖ್ಯಾತರ ಭದ್ರತೆ ಎಷ್ಟು ಸುಧಾರಣೆ ಕಾಣಬಹುದು ಎಂಬ ಕುತೂಹಲವಿದೆ.
0 Comments