ಬಾಲಿ (ಇಂಡೋನೇಷ್ಯಾ) | ಫೆಬ್ರವರಿ 25, 2026
ಇಂಡೋನೇಷ್ಯಾದ ಪ್ರಸಿದ್ಧ ಪ್ರವಾಸಿ ದ್ವೀಪವಾದ ಬಾಲಿಯಲ್ಲಿ ಕಳೆದ ಕೆಲವು ದಿನಗಳಿಂದ ಸುರಿದ ಭಾರೀ ಮಳೆಯಿಂದ ಹಲವೆಡೆ ಪ್ರವಾಹ ಉಂಟಾಗಿ ಜನಜೀವನ ಅಸ್ತವ್ಯಸ್ತವಾಗಿದೆ.
ರಾಜಧಾನಿ ಡೆನ್‌ಪಾಸರ್ ಸೇರಿದಂತೆ ಕುಟಾ, ಲೆಗಿಯನ್, ಸನೂರು ಮತ್ತು ಉಬುಡ್ ಪ್ರದೇಶಗಳಲ್ಲಿ ರಸ್ತೆಗಳು ಮತ್ತು ಮನೆಗಳು ನೀರಿನಲ್ಲಿ ಮುಳುಗಿವೆ.
ನಿರಂತರ ಮಳೆಯಿಂದ ನದಿಗಳು ಉಕ್ಕಿ ಹರಿದ ಪರಿಣಾಮ ಕೆಲ ಪ್ರದೇಶಗಳಲ್ಲಿ ನೀರಿನ ಮಟ್ಟ ಒಂದು ಮೀಟರ್‌ವರೆಗೆ ಏರಿಕೆಯಾಗಿದೆ.
ಪ್ರವಾಹದ ನೀರು ಮನೆಗಳಿಗೆ ನುಗ್ಗಿ ಫರ್ನಿಚರ್, ವಾಹನಗಳು ಸೇರಿದಂತೆ ಆಸ್ತಿ ಹಾನಿಯಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. Indonesia Meteorology, Climatology and Geophysics Agency ಅತ್ಯುನ್ನತ ಮಟ್ಟದ ಹವಾಮಾನ ಎಚ್ಚರಿಕೆ ಜಾರಿ ಮಾಡಿ ಮುಂದಿನ ದಿನಗಳಲ್ಲಿಯೂ ಭಾರೀ ಮಳೆಯ ಸಾಧ್ಯತೆ ಇದೆ ಎಂದು ತಿಳಿಸಿದೆ.
ಪ್ರವಾಹಕ್ಕೆ ಸಿಲುಕಿದ ನಿವಾಸಿಗಳು ಮತ್ತು ಪ್ರವಾಸಿಗರನ್ನು ರಬ್ಬರ್ ದೋಣಿಗಳ ಮೂಲಕ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಕೆಲವು ಪ್ರದೇಶಗಳಲ್ಲಿ ಭೂಕುಸಿತವೂ ಸಂಭವಿಸಿ ಕಟ್ಟಡಗಳಿಗೆ ಹಾನಿಯಾಗಿದೆ. ಅದೃಷ್ಟವಶಾತ್ ಈ ಘಟನೆಗಳಲ್ಲಿ ಸಾವು ನೋವು ವರದಿಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಳೆಗಾಲದ ತೀವ್ರತೆಯಿಂದ ವಿಮಾನಯಾನ ಮತ್ತು ಸಾರಿಗೆ ವ್ಯವಸ್ಥೆಯಲ್ಲೂ ವ್ಯತ್ಯಯ ಉಂಟಾಗಿದೆ. ಪ್ರವಾಸೋದ್ಯಮದ ಮೇಲೆ ಅವಲಂಬಿತವಾದ ಬಾಲಿಯಲ್ಲಿ ಈ ಪ್ರಕೃತಿ ವಿಕೋಪವು ಆರ್ಥಿಕ ಚಟುವಟಿಕೆಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ತಜ್ಞರು ಹೇಳಿದ್ದಾರೆ.
ಸ್ಥಳೀಯ ಆಡಳಿತ ಮತ್ತು ತುರ್ತು ಸೇವಾ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ಮುಂದುವರೆಸಿದ್ದು, ಜನರು ಎಚ್ಚರಿಕೆಯಿಂದ ಇರಲು ಸೂಚಿಸಲಾಗಿದೆ.
0 Comments