ಇರಾಕ್‌ನಲ್ಲಿ ಅಮೇರಿಕಾದ ವಿಮಾನ ಪತನ; 4 ಸಿಬ್ಬಂದಿ ಸಾವು, ಇನ್ನಿಬ್ಬರಿಗಾಗಿ ಮುಂದುವರಿದ ಶೋಧ!

ಇರಾಕ್‌ನ ಪಶ್ಚಿಮ ಭಾಗದಲ್ಲಿ ಅಮೆರಿಕದ ವಾಯುಪಡೆಯ KC-135 Stratotanker ಇಂಧನ ತುಂಬುವ ಯುದ್ಧ ವಿಮಾನ ಪತನಗೊಂಡ ಪರಿಣಾಮ ನಾಲ್ವರು ಸಿಬ್ಬಂದಿ ಸಾವನ್ನಪ್ಪಿರುವುದಾಗಿ ಅಮೆರಿಕ ಸೇನಾ ಅಧಿಕಾರಿಗಳು ದೃಢಪಡಿಸಿದ್ದಾರೆ.


ಅಮೆರಿಕದ ಕೇಂದ್ರ ಕಮಾಂಡ್ (CENTCOM) ನೀಡಿದ ಮಾಹಿತಿಯ ಪ್ರಕಾರ, ಮಾರ್ಚ್ 12 ರಂದು ಇರಾನ್ ವಿರುದ್ಧ ನಡೆಯುತ್ತಿರುವ ಸೈನಿಕ ಕಾರ್ಯಾಚರಣೆಗೆ ಬೆಂಬಲ ನೀಡುವ ವೇಳೆ ಈ ಘಟನೆ ಸಂಭವಿಸಿದೆ.


 ವಿಮಾನದಲ್ಲಿ ಒಟ್ಟು ಆರು ಮಂದಿ ಸಿಬ್ಬಂದಿ ಇದ್ದರು. ಅವರಲ್ಲಿ ನಾಲ್ವರು ಮೃತಪಟ್ಟಿದ್ದು, ಉಳಿದ ಇಬ್ಬರನ್ನು ಹುಡುಕುವ ಕಾರ್ಯಾಚರಣೆ ಮುಂದುವರಿದಿದೆ.

ಪ್ರಾಥಮಿಕ ಮಾಹಿತಿ ಪ್ರಕಾರ, ಎರಡು KC-135 ಟ್ಯಾಂಕರ್ ವಿಮಾನಗಳ ನಡುವೆ ಗಗನದಲ್ಲಿ ಸಂಭವಿಸಿದ ಅಪಘಾತದ ನಂತರ ಒಂದು ವಿಮಾನ ಇರಾಕ್‌ನಲ್ಲಿ ಪತನಗೊಂಡಿದೆ. ಮತ್ತೊಂದು ವಿಮಾನ ಹಾನಿಗೊಂಡಿದ್ದರೂ ಸುರಕ್ಷಿತವಾಗಿ ಇಳಿಯಲು ಸಾಧ್ಯವಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ಈ ಪತನವು ಶತ್ರು ದಾಳಿ ಅಥವಾ ಗುಂಡಿನ ದಾಳಿಯಿಂದ ಸಂಭವಿಸಿಲ್ಲ ಎಂದು ಅಮೆರಿಕ ಸೇನೆ ಸ್ಪಷ್ಟಪಡಿಸಿದೆ. ಘಟನೆಯ ನಿಖರ ಕಾರಣ ತಿಳಿದುಕೊಳ್ಳಲು ತನಿಖೆ ಮುಂದುವರಿದಿದೆ.

ಈ ನಡುವೆ, ಇರಾನ್ ಯುದ್ಧಕ್ಕೆ ಸಂಬಂಧಿಸಿದ ಕಾರ್ಯಾಚರಣೆ ಆರಂಭವಾದ ನಂತರ ಅಮೆರಿಕ ಸೇನೆಗೆ ಸಂಭವಿಸಿದ ಪ್ರಮುಖ ನಷ್ಟಗಳಲ್ಲಿ ಇದೂ ಒಂದಾಗಿದೆ ಎಂದು ವರದಿಗಳು ತಿಳಿಸಿವೆ.


Post a Comment

0 Comments