ಬೆಂಗಳೂರಿನ ವಸತಿ ಪ್ರದೇಶವೊಂದರಲ್ಲಿ ಭಾರೀ ಪ್ರಮಾಣದ ಸ್ಫೋಟಕ ಪತ್ತೆ; ಜನರಲ್ಲಿ ಆತಂಕ!

ಬೆಂಗಳೂರು:

ನಗರದ ವಸತಿ ಪ್ರದೇಶವೊಂದರಲ್ಲಿ ಭಾರೀ ಪ್ರಮಾಣದ ಸ್ಫೋಟಕ ವಸ್ತುಗಳು ಪತ್ತೆಯಾಗಿರುವ ಘಟನೆ ಮಂಗಳವಾರ ಬೆಳಕಿಗೆ ಬಂದಿದ್ದು, ಸ್ಥಳೀಯ ನಿವಾಸಿಗಳಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಬೆಂಗಳೂರು ದಕ್ಷಿಣ ಭಾಗದ ಅಕ್ಷಯನಗರ (ಹುಳಿಮಾವು ಪೊಲೀಸ್ ಠಾಣಾ ವ್ಯಾಪ್ತಿ)ಯಲ್ಲಿರುವ ವಸತಿ ಲೇಔಟ್‌ನಲ್ಲಿ ಈ ಸ್ಫೋಟಕಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.


ಪೊಲೀಸರು ನೀಡಿರುವ ಮಾಹಿತಿಯಂತೆ, ಖಾಸಗಿ ಕಟ್ಟಡ ನಿರ್ಮಾಣ ಕಾರ್ಯಕ್ಕೆ ಬಳಸಲಾಗುತ್ತಿದ್ದಂತೆ ಶಂಕಿಸಲಾದ ಜೆಲಟಿನ್ ಸ್ಟಿಕ್‌ಗಳು, ಡಿಟೊನೇಟರ್‌ಗಳು ಹಾಗೂ ಇತರೆ ಸ್ಫೋಟಕ ಸಾಮಗ್ರಿಗಳು ಯಾವುದೇ ಕಾನೂನು ಅನುಮತಿ ಇಲ್ಲದೆ ಸಂಗ್ರಹಿಸಲಾಗಿತ್ತು. 

ಸ್ಥಳಕ್ಕೆ ತಕ್ಷಣವೇ ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳ (BDD) ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಯಾವುದೇ ಅಪಾಯ ಸಂಭವಿಸುವ ಮುನ್ನವೇ ವಸ್ತುಗಳನ್ನು ಸುರಕ್ಷಿತವಾಗಿ ವಶಪಡಿಸಿಕೊಳ್ಳಲಾಗಿದೆ.


ಘಟನೆಯ ಮಾಹಿತಿ ಹರಡುತ್ತಿದ್ದಂತೆ ಸ್ಥಳೀಯ ನಿವಾಸಿಗಳು ಆತಂಕಗೊಂಡಿದ್ದು, ಮಕ್ಕಳ ಹಾಗೂ ವೃದ್ಧರ ಸುರಕ್ಷತೆ ಬಗ್ಗೆ ಚಿಂತ ವ್ಯಕ್ತಪಡಿಸಿದ್ದಾರೆ. “ವಸತಿ ಪ್ರದೇಶದಲ್ಲಿ ಇಂತಹ ಅಪಾಯಕಾರಿ ವಸ್ತುಗಳ ಸಂಗ್ರಹ ಅಕ್ಷಮ್ಯ” ಎಂದು ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಅಕ್ರಮವಾಗಿ ಸ್ಫೋಟಕಗಳನ್ನು ಸಂಗ್ರಹಿಸಿದವರು ಯಾರು, ಯಾವ ಉದ್ದೇಶಕ್ಕಾಗಿ ಇವುಗಳನ್ನು ಬಳಸಲಾಗುತ್ತಿತ್ತು ಎಂಬುದರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.


 ಪ್ರಾಥಮಿಕ ತನಿಖೆಯ ಪ್ರಕಾರ, ಇದು ಉಗ್ರ ಚಟುವಟಿಕೆಗೆ ಸಂಬಂಧಿಸಿದೆ ಎಂಬ ಯಾವುದೇ ದೃಢ ಮಾಹಿತಿ ಲಭ್ಯವಾಗಿಲ್ಲ ಎಂದು ಪೊಲೀಸ್ ಮೂಲಗಳು ಸ್ಪಷ್ಟಪಡಿಸಿವೆ .

ಪೊಲೀಸರು ಸಾರ್ವಜನಿಕರಲ್ಲಿ ಶಾಂತಿ ಕಾಪಾಡಿಕೊಳ್ಳುವಂತೆ ಮನವಿ ಮಾಡಿದ್ದು, ಯಾವುದೇ ಅನುಮಾನಾಸ್ಪದ ಚಟುವಟಿಕೆ ಕಂಡುಬಂದಲ್ಲಿ ತಕ್ಷಣವೇ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಸೂಚಿಸಿದ್ದಾರೆ. ತನಿಖೆ ಮುಂದುವರಿದಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನ ವಿವರಗಳು ಬಹಿರಂಗವಾಗುವ ಸಾಧ್ಯತೆ ಇದೆ .

Post a Comment

0 Comments