ನವದೆಹಲಿ | ಫೆಬ್ರವರಿ 23:
ರಾಜಧಾನಿ ದೆಹಲಿಯಲ್ಲಿ ಸಂಭವಿಸಬಹುದಾದ ಉಗ್ರ ದಾಳಿಯ ಭೀತಿ ಹಿನ್ನೆಲೆಯಲ್ಲಿ ಭದ್ರತಾ ವ್ಯವಸ್ಥೆಯನ್ನು ಕಟ್ಟು ನಿಟ್ಟುಗೊಳಿಸಲಾಗಿದೆ. ಪಾಕಿಸ್ತಾನ ಮೂಲದ ಉಗ್ರ ಸಂಘಟನೆ ಲಷ್ಕರ್-ಎ-ತೈಬಾ (LeT) ನಗರದಲ್ಲಿ ಸ್ಫೋಟಕ ದಾಳಿ ನಡೆಸಲು ಸಂಚು ರೂಪಿಸಿದೆ ಎಂಬ ಗುಪ್ತಚರ ಮಾಹಿತಿ ದೊರೆತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗುಪ್ತಚರ ವರದಿಗಳ ಪ್ರಕಾರ, ಇತಿಹಾಸ ಪ್ರಸಿದ್ಧ ಲಾಲ್ ಕಿಲ್ಲಾ ಹಾಗೂ ಜನಸಂದಣಿ ಪ್ರದೇಶವಾದ ಚಾಂದಿನಿ ಚೌಕ್ ಭಾಗಗಳನ್ನು ಗುರಿಯಾಗಿಸಿಕೊಂಡು ಐಇಡಿ ಸ್ಫೋಟ ನಡೆಸುವ ಯೋಜನೆ ಇದ್ದಿರಬಹುದು ಎಂದು ಶಂಕಿಸಲಾಗಿದೆ.
ಇದರ ಆಧಾರದ ಮೇಲೆ ದೆಹಲಿ ಪೊಲೀಸ್ ಸೇರಿದಂತೆ ಭದ್ರತಾ ಸಂಸ್ಥೆಗಳು ನಗರ ಪ್ರವೇಶಿಸುವ ವಾಹನಗಳ ಪರಿಶೀಲನೆ ಹೆಚ್ಚಿಸಿದ್ದು, ಪ್ರಮುಖ ಪ್ರದೇಶಗಳಲ್ಲಿ ಹೆಚ್ಚುವರಿ ಪೊಲೀಸ್ ಪಡೆ ನಿಯೋಜಿಸಲಾಗಿದೆ. ಸಿಸಿಟಿವಿ ನಿಗಾವನ್ನು ಕೂಡ ಬಲಪಡಿಸಲಾಗಿದೆ.
ಇದಕ್ಕೂ ಮಧ್ಯೆ, ಬಹು ರಾಜ್ಯಗಳಲ್ಲಿ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಉಗ್ರರೊಂದಿಗೆ ಸಂಪರ್ಕ ಹೊಂದಿದ್ದ ಅನುಮಾನಿತರನ್ನು ಬಂಧಿಸಲಾಗಿದ್ದು, ದೆಹಲಿಯಲ್ಲಿ ಸಂಭವಿಸಬಹುದಾದ ದಾಳಿಯನ್ನು ಮುಂಚಿತವಾಗಿ ತಡೆದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರತ್ಯೇಕ ಘಟನೆಯಲ್ಲಿ ಲಾಲ್ ಕಿಲಾ ಮತ್ತು ದೆಹಲಿ ಕಾರ್ಯಾಲಯಕ್ಕೆ ಬಾಂಬ್ ಬೆದರಿಕೆ ಇಮೇಲ್‌ಗಳು ಬಂದಿದ್ದ ಹಿನ್ನೆಲೆಯಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗಿದ್ದು, ಯಾವುದೇ ಸ್ಫೋಟಕ ವಸ್ತು ಪತ್ತೆಯಾಗಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಅಧಿಕಾರಿಗಳು ಸಾರ್ವಜನಿಕರಿಗೆ ಆತಂಕ ಪಡುವ ಅಗತ್ಯವಿಲ್ಲ, ಆದರೆ ಅನುಮಾನಾಸ್ಪದ ಚಟುವಟಿಕೆ ಕಂಡುಬಂದರೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡುವಂತೆ ಮನವಿ ಮಾಡಿದ್ದಾರೆ.
0 Comments