ಅವರ ಸಿಡಿಲಿನಂತಹ ಮಾತುಗಳಿಗೆ ಕಿವಿಯಾಗಬೇಕು. ಇವತ್ತು ಸ್ವಾಮಿ ವಿವೇಕಾನಂದರ ಗೌರವಕ್ಕಾಗಿ ನಾವು ಈ ದಿನ ಅವರ ಸ್ಮರಣೆ ಮಾಡುವುದಕ್ಕಿಂತ ಹೆಚ್ಚಾಗಿ ನಮಗೆಲ್ಲ ಮುಖ್ಯವಾಗಿ ಇಂದಿನ ಯುವ ಪೀಳಿಗೆಗೆ ಸ್ವಾಮಿ ವಿವೇಕಾನಂದರ ಮಾರ್ಗದರ್ಶನ ಮತ್ತು ಅವರ ಜೀವನಗಾಥೆಯ ಬಗ್ಗೆ ತಿಳಿಯಬೇಕಾದ ಅವಶ್ಯಕತೆ ಇದೆ .
ಸ್ವಾಮಿ ವಿವೇಕಾನಂದರು ರಾಮಕೃಷ್ಣ ಪರಮಹಂಸರಿಂದ ದೀಕ್ಷೆ ಪಡೆದ ಬಳಿಕ ಅವರ ಪ್ರವಾಸ/ಯಾತ್ರೆಯ ಉದ್ದಕ್ಕೂ ಅವರ ಅಪಾರವಾದ ಬುದ್ದಿವಂತಿಕೆ, ಸಮಾಜದ ಸತ್ಯಗಳನ್ನು ಅತ್ಯಂತ ನೇರವಾಗಿ ನಿಷ್ಠುರವಾಗಿ ಸಮಾಜದ ಮುಂದೆ ಕನ್ನಡಿಯಂತೆ ಹಿಡಿಯಬಲ್ಲ ಧೈರ್ಯ, ಸಾಹಸ, ಅಚ್ಚರಿಗೊಳಿಸುವಂತಹ ಪಾಂಡಿತ್ಯ, ಎದುರಿಗೆ ಬಂಡ ಯಾರನ್ನೇ ಆಗಲಿ ತಮ್ಮ ತರ್ಕಡಾ ಮೂಲಕ ಸೋಲಿಸಬಲ್ಲ ಪ್ರಭುದ್ದತೆ, ಸಮಾಜ, ದೇಶ ಬೆಳೆಯಬೇಕಾದ ದಾರಿಯ ಬಗೆಗಿನ ದೂರದರ್ಶಿತ್ವ ಇದೆಲ್ಲ ತುಂಬಿ ತುಳುಕುತ್ತಿದ್ದರೂ ಅವರ ಪಶ್ಚಿಮ ದೇಶಗಳ ಪ್ರಯಾಣ ಸುಲಭವಾಗಿರಲಿಲ್ಲ.
ಮಾತು ಮಾತಿಗೂ ಬದುಕಿನ ಬಗ್ಗೆ ನಿರಾಶರಾಗುವ, ಸದಾ ಮನಸ್ಸನ್ನು ಗೊಂದಲ ಗೂಡಾಗಿಸಿಕೊಳ್ಳುವ ಇವತ್ತಿನ ಯುವಜನತೆಗೆ ಸ್ವಾಮಿ ವಿವೇಕಾನಂದರ ಬದುಕಿನ ಪ್ರತೀ ಹೆಜ್ಜೆಯೂ ಪಾಠವೇ. ಆದರೆ ದೇಶದ ಭವಿಷ್ಯದ ದೃಷ್ಟಿಯಿಂದ ನೋಡುವುದಾದರೆ ಯುವ ಮನಸ್ಸು ತಮ್ಮೊಳಗಿನ ಅಂತರಸತ್ವ ವನ್ನು ಹೇಗೆ ಗುರುತಿಸಬೇಕು ಎಂದು ತಿಳಿಯಲು ಈ ಒಂದು ಘಟನೆ ಬಹಳ ಪರಿಣಾಮಕಾರಿ.
ಸ್ವಾಮಿ ವಿವೇಕಾನಂದರು 1893 ರಲ್ಲಿ ಅಮೆರಿಕಾದ ಚಿಕಾಗೋದಲ್ಲಿ ನಡೆದ ವಿಶ್ವ ಧರ್ಮ ಸಮ್ಮೇಳನದ ಧರ್ಮ ಸಂಸತ್ತಿನಲ್ಲಿ ಮಾಡಿದ ಐತಿಹಾಸಿಕ ಭಾಷಣ ಇಂದಿಗೂ ವಿಶ್ವವಿಖ್ಯಾತವಾಗಿದೆ. ಆದರೆ ಆ ಭಾಷಣದ ಹಿಂದೆ ಇರುವ ಅವರ ಪರಿಶ್ರಮ, ವಿಶೇಷವಾಗಿ ಭಾರತದಿಂದ ಅಮೆರಿಕದವರೆಗೆ ನಡೆದ ಕಠಿಣ ಪ್ರಯಾಣ, ಬಹಳ ಕಡಿಮೆ ಜನರಿಗೆ ಮಾತ್ರ ಸಂಪೂರ್ಣವಾಗಿ ತಿಳಿದಿದೆ. ಅದು ಕೇವಲ ಒಂದು ಜಾಗದಿಂದ ಇನ್ನೊಂದು ಸ್ಥಳದ ಪ್ರಯಾಣ ಮಾತ್ರವಲ್ಲ; ಅದು ಆತ್ಮವಿಶ್ವಾಸ, ತ್ಯಾಗ ಮತ್ತು ಅಚಲ ಸಂಕಲ್ಪದ ಪಯಣವಾಗಿತ್ತು.
ಸ್ವಾಮಿ ವಿವೇಕಾನಂದರು ತಮ್ಮ ಗುರುಗಳ ಆದೇಶದಂತೆ ಭಾರತೀಯ ಆಧ್ಯಾತ್ಮಿಕ ಶಕ್ತಿಯನ್ನು ಜಗತ್ತಿಗೆ ಪರಿಚಯಿಸಬೇಕೆಂಬ ಗುರಿಯನ್ನು ಹೊಂದಿದ್ದರು. ಆದರೆ ಅಂದಿನ ದಿನಗಳಲ್ಲಿ ಭಾರತ ವಸಾಹತುಶಾಹಿಯ ಆಡಳಿತದಲ್ಲಿ ಇತ್ತು. ಅಂತಹ ಪರಿಸ್ಥಿತಿಯಲ್ಲಿ ವಿದೇಶಕ್ಕೆ ತೆರಳುವುದು ಸಾಮಾನ್ಯ ವಿಷಯವಲ್ಲ. ಅದರಲ್ಲೂ ಸಂನ್ಯಾಸಿಯೊಬ್ಬನು, ಯಾವುದೇ ಅಧಿಕೃತ ಆಹ್ವಾನ ಇಲ್ಲದೆಯೇ ಅಮೆರಿಕಕ್ಕೆ ತೆರಳುವುದು ದೊಡ್ಡ ಧೈರ್ಯದ ನಿರ್ಧಾರವಾಗಿತ್ತು.
ಇದಕ್ಕಾಗಿ ಭಾರತದಲ್ಲಿ ಯಾತ್ರೆ ಮಾಡುತ್ತಿದಾಗಲೇ ಸ್ವಾಮಿ ವಿವೇಕಾನಂದರು ತಮ್ಮ ಗುರಿಯನ್ನು ಹಲವರಿಗೆ ತಿಳಿಸಿದರು. ಕೆಲವರು ಸ್ವಾಮೀಜಿಯ ಮಾತನ್ನು ಕೇಳಿ ನಕ್ಕರು, ಕೆಲವರು ಪ್ರೋತ್ಸಾಹ ನೀಡಿದರು. ಕೊನೆಗೆ ಕೆಲವು ಭಕ್ತರು ಮತ್ತು ಕೆಲ ರಾಜರು ನೀಡಿದ ಅಲ್ಪ ಸಹಾಯದಿಂದ, ಅವರು ವಿದೇಶ ಪ್ರಯಾಣಕ್ಕೆ ಸಿದ್ಧರಾದರು. 10 ದಿನಗಳ ಖರ್ಚಿಗಾಗುವಷ್ಟು ದುಡ್ಡು ಮಾತ್ರ ಅವರಲ್ಲಿ ಸಂಗ್ರಹವಾಗಿತ್ತು. ಮತ್ತು ಅವರ ಪ್ರಯಾಣ 3 ತಿಂಗಳದ್ದೆಂದು ನಿಗದಿಯಾಗಿತ್ತು. 10 ದಿನಗಳಲ್ಲಿ ಅಮೇರಿಕಾ ತಲುಪುವುದೂ ಸಾದ್ಯವಿರಲಿಲ್ಲ , ಅವರ ಕೈಯಲ್ಲಿದ್ದ ಸಂಪತ್ತು ಬಹಳ ಕಡಿಮೆ; ಆದರೂ ಮನಸ್ಸಿನಲ್ಲಿ ಅಪಾರ ಧೈರ್ಯ ಮತ್ತು ಗುರಿಯ ಮೇಲಿನ ನಂಬಿಕೆ ಇತ್ತು.
1893ರ ಆರಂಭದಲ್ಲಿ ಅವರು ಭಾರತದಿಂದ ಸಮುದ್ರ ಮಾರ್ಗದ ಮೂಲಕ ಹೊರಟರು. ಅಂದು ವಿಮಾನ ಪ್ರಯಾಣವಿರಲಿಲ್ಲ. ವಾರಗಳ ಕಾಲ ಸಮುದ್ರ ಯಾನವೇ ಲಭ್ಯವಿದ್ದ ಏಕೈಕ ಮಾರ್ಗ. ಸಮುದ್ರದ ಅಲೆಗಳು, ಹವಾಮಾನ ಬದಲಾವಣೆಗಳು ಮತ್ತು ಆಹಾರ ಮುಂತಾದ ಅನೇಕ ಅನಿಶ್ಚಿತತೆಗಳು ಅವರನ್ನು ಕಾಡಿದವು. ಆದರೆ ಈ ಎಲ್ಲ ಕಷ್ಟಗಳ ನಡುವೆಯೂ, ಅವರ ಮನಸ್ಸು ಸ್ಥಿರವಾಗಿತ್ತು. ತಮ್ಮ ದೇಶದ ಆತ್ಮವನ್ನು ಜಗತ್ತಿಗೆ ತಲುಪಿಸಬೇಕೆಂಬ ಏಕೈಕ ಸಂಕಲ್ಪವೇ ಅವರ ಶಕ್ತಿ.
ಸುಧೀರ್ಘ ಪ್ರಯಾಣದ ಬಳಿಕ ಅಮೇರಿಕಾ ತಲುಪಿದ ನಂತರ, ಸ್ವಾಮಿ ವಿವೇಕಾನಂದರು ಹೊಸ ರೀತಿಯ ಸಂಕಷ್ಟಗಳನ್ನು ಎದುರಿಸಬೇಕಾಯಿತು. ಭಾಷೆಯ ಅಂತರ, ಸಂಸ್ಕೃತಿಯ ಅಜಗಜಾಂತರ ವ್ಯತ್ಯಾಸ ಮತ್ತು ಜನರ ಅನುಮಾನಭರಿತ ದೃಷ್ಟಿ — ಎಲ್ಲವೂ ಹೊಸ ಅನುಭವವಾಗಿತ್ತು.
ಸಂನ್ಯಾಸಿಯ ವೇಷದಲ್ಲಿದ್ದ ಕಾರಣ, ಕೆಲವರು ಅವರನ್ನು ಅಸಹಜವಾಗಿ ನೋಡಿದರು. ವಾಸಕ್ಕೆ ಸ್ಥಳವಿಲ್ಲ, ಸ್ಥಿರ ಆದಾಯವಿಲ್ಲ, ಕೈಯಲ್ಲಿ ದುಡ್ಡಿಲ್ಲ. ಹೀಗಾಗಿ ಅನೇಕ ದಿನಗಳಕಾಲ ರಾತ್ರಿ ಸ್ವಾಮೀಜಿ ರೈಲು ನಿಲ್ದಾಣಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಕಳೆಯಬೇಕಾಯಿತು.
ಹೋಟೆಲ್‌ಗಳು ಅವರಿಗೆ ಪ್ರವೇಶ ನೀಡುತ್ತಿರಲಿಲ್ಲ. ಕೆಲವರು ಅವರನ್ನು ದರಿದ್ರ ಅಲೆಮಾರಿ ಎಂದು ಭಾವಿಸಿದರು.
ಈ ಎಲ್ಲ ಅವಮಾನಗಳ ನಡುವೆಯೂ ಅವರು ತಮ್ಮ ಗುರಿಯನ್ನು ಮರೆತಿರಲಿಲ್ಲ. “ಇದು ನನ್ನ ವೈಯಕ್ತಿಕ ಪಯಣವಲ್ಲ; ಇದು ಭಾರತದ ಸಂದೇಶವನ್ನು ಜಗತ್ತಿಗೆ ತಲುಪಿಸುವ ಪಯಣ” ಎಂಬ ಚಿಂತನೆ ಅವರ ಮನಸ್ಸನ್ನು ಬಲಪಡಿಸಿತು.
ಇಷ್ಟು ಕಷ್ಟಗಳ ಸರಮಾಲೆಯ ಬಳಿಕ ಚಿಕಾಗೋ ತಲುಪಿದಾಗ ಮತ್ತೊಂದು ದೊಡ್ಡ ಆಘಾತವಾಗಿತ್ತು. ವಿಶ್ವ ಧರ್ಮ ಸಂಸತ್ತಿನಲ್ಲಿ ಮಾತನಾಡಲು ಆಹ್ವಾನ ಇಲ್ಲದ ಕಾರಣ ಅವರಿಗೆ ಪ್ರವೇಶವೇ ಸಿಗಲಿಲ್ಲ. ಅನೇಕ ದಿನಗಳ ಸೆಣೆಸಾಟದ ನಂತರ, ಕೆಲ ಅಮೆರಿಕನ್ ಸ್ನೇಹಿತರ ನೆರವಿನಿಂದ ಅವರು ಪ್ರತಿನಿಧಿಯಾಗಿ ನೋಂದಣಿ ಮಾಡಿಕೊಳ್ಳಲು ಸಾಧ್ಯವಾಯಿತು. ಇದು ಅವರ ದೀರ್ಘ ಪ್ರಯಾಣದ ಮೊದಲ ದೊಡ್ಡ ಜಯವಾಗಿತ್ತು.
ಈ ಹಂತದಲ್ಲಿ ಸ್ವಾಮಿ ವಿವೇಕಾನಂದರು ಬಳಿ ಯಾವುಡೇ ಯೋಜನೆಗಳಿರಲಿಲ್ಲ, ಸಂಪೂರ್ಣವಾಗಿ ವಿಧಿಯ ಮೇಲೆ ನಂಬಿಕೆ ಇಟ್ಟುಕೊಂಡಿದ್ದರು. ಅವರಲ್ಲಿ ಯಾವುದೇ ಅಹಂಕಾರವಿರಲಿಲ್ಲ, ಆದರೆ ಅಪಾರವಾದ ಆತ್ಮವಿಶ್ವಾಸ ಇತ್ತು. ಬಂದ ಕೆಲಸವನ್ನು ಖಂಡಿತ ಪೂರೈಸುತ್ತೇನೆ ಎಂಬ ನಂಬಿಕೆಯಲ್ಲಿದ್ದರು.
ಕೊನೆಗೂ ಸೆಪ್ಟೆಂಬರ್‌ನಲ್ಲಿ ಚಿಕಾಗೋ ಧರ್ಮ ಸಂಸತ್ತಿನ ವೇದಿಕೆಯಲ್ಲಿ ಭಾಷಣಗಳ ಸರಣಿಯ ಕೊನೆಯಲ್ಲಿ ತಮ್ಮ ಸರದಿ ಬಂದಾಗ ವೇದಿಕೆ ಎದ್ದು ನಿಂತಾಗ, ಅವರ ಬೆನ್ನಹಿಂದೆ ತಿಂಗಳುಗಳ ಹಸಿವು, ಅಪಮಾನ ಮತ್ತು ಅಸಹಾಯಕತೆಗಳು ಮಾತ್ರ ಜೊತೆಗೆ ನಿಂತಿದ್ದವು.
“ಸಿಸ್ಟರ್ಸ್ ಅಂಡ್ ಬ್ರದರ್ಸ್ ಆಫ್ ಅಮೆರಿಕಾ…” ಎಂಬ ಮೊದಲ ವಾಕ್ಯವೇ ಸಭಾಂಗಣದಲ್ಲಿ ನಡೆಯುತ್ತಿದ್ದ ಎಲ್ಲ ಗದ್ದಲಗಳನ್ನು ಮೌನಗೊಳಿಸಿತು. ಈ ಶಬ್ದಗಳಿಂದ ಆಶ್ಚರ್ಯಗೊಂಡ ಜನ ನಿಧಾನವಾಗಿ ಸಾವರಿಸಿಕೊಳ್ಳುತ್ತ ಎದ್ದು ನಿಂತು ಚಪ್ಪಾಳೆ ತಟ್ಟತೊಡಗಿದರು. ಚಪ್ಪಾಳೆಯ ಸದ್ದು ನಿರಂತರವಾಗಿ 3 ನಿಮಿಷಗಳ ಕಾಲ ಝೇಂಕರಿಸುತ್ತಲೇ ಇತ್ತು. ಆ ಕ್ಷಣಕ್ಕೆ ಸ್ವಾಮಿ ವಿವೇಕಾನಂದರ ಸುದೀರ್ಘ ಸಂಘರ್ಷಭರಿತ ಪ್ರಯಾಣಕ್ಕೆ ಅರ್ಥ ದೊರಕಿತು. ನಮಗೆಲ್ಲ ಗೊತ್ತಿರುವಂತೆ ಮುಂದಿನದ್ದೆಲ್ಲಾ ಇತಿಹಾಸ.
ಭಾರತದಿಂದ ಚಿಕಾಗೋವರೆಗೆ ಸ್ವಾಮಿ ವಿವೇಕಾನಂದರ ಯಾತ್ರೆ ನಮಗೆ ಹೇಳುವುದು ಏನೆಂದರೆ ದೂರ, ದಾರಿದ್ರ್ಯ ಅಥವಾ ಅವಮಾನ ಇವೆಲ್ಲ ನಮ್ಮ ಮಹಾನ್ ಗುರಿಗೆ ಅಡ್ಡಿಯಾಗುವುದಿಲ್ಲ ಎಂಬ ಸತ್ಯ. ಅವರ ಚಿಕಾಗೋ ಭಾಷಣದ ಯಶಸ್ಸು ಕೇವಲ ವ್ಯಕ್ತಿಯ ವಿಜಯವಲ್ಲ; ಅದು ಭಾರತದ ಆತ್ಮಗೌರವದ ವಿಜಯ.
ಇಂದು, ನೂರಾರು ವರ್ಷಗಳ ನಂತರವೂ, ಸ್ವಾಮಿ ವಿವೇಕಾನಂದರ ಭಾಷಣ, ಜೀವನ, ಮಾತುಗಳು ಭಾರತೀಯ ಯುವಜನತೆಗೆ ಧೈರ್ಯ, ಸಹನೆ ಮತ್ತು ಆತ್ಮವಿಶ್ವಾಸದ ಪಾಠ ಹೇಳುತ್ತಲೇ ಇದೆ.
ನಮ್ಮೊಳಗಿನ ಅಂತಸ್ಸತ್ವ ಏನೆಂದು ಅರಿಯಬೇಕಾದರೆ ಸ್ವಾಮಿ ವಿವೇಕಾನಂದರನ್ನು ಓದಬೇಕು ಅನ್ನೋದು ನಿರೂಪಿಸಲ್ಪಟ್ಟಿರುವ ಸತ್ಯ.
- ಅಕ್ಷತಾ ಬಜ್ಪೆ
0 Comments